ಡಿ ಮಾಯ್ನ್ ನದಿ  -
ಅಮೆರಿಕ ಸಂಯುಕ್ತ ಸಂಸ್ಥಾನಗಳ ಐಯೊವ ರಾಜ್ಯದ ಅತ್ಯಂತ ಉದ್ದವಾದ ನದಿ.  ಪಶ್ಚಿಮದಿಂದ ಬಂದು ಮಿಸಿಸಿಪಿಯನ್ನು ಸೇರುವ ಒಂದು ಮುಖ್ಯ ಉಪನದಿ.  ಮಿನಸೋಟದ ನೈಋತ್ಯ ಭಾಗದಲ್ಲಿ ಪೈಪ್‍ಸ್ಟೋನ್ ಪಟ್ಟಣದ ಬಳಿ ಉಗಮಿಸಿ ಆಗ್ನೇಯಭಿಮುಖವಾಗಿ 535 ಮೈ. ಹರಿದು ಐಯೊವ ರಾಜ್ಯದ ಆಗ್ನೇಯ ಭಾಗದಲ್ಲಿ ಕೀಯಕಕ್ಕ ಪಟ್ಟಣಕ್ಕೆ 2 ಮೈ. ದೂರದಲ್ಲಿ ಮಿಸಿಸಿಪಿಯನ್ನು ಸೇರುತ್ತದೆ.  ಮಧ್ಯ ಐಯೊವದಲ್ಲಿರುವ ಹಂಬೋಲ್ಟ್ ನಗರದಿಂದ ಮೇಲ್ಕೆ ಈ ನದಿಗೆ ವೆಸ್ಟ್ ಪೋರ್ಕ್ ಎಂಬ ಹೆಸರುಂಟು.  ಈಸ್ಟ್ ಫೋರ್ಕ್, ರ್ಯಾಕೂನ್ ಇವು ಇದರ ಎರಡು ಮುಖ್ಯ ಉಪನದಿಗಳು. ಉಗಮದಿಂದ ಸಂಗಮದ ವರೆಗೆ ಈ ನದಿ 1,375' ಇಳಿಯುತ್ತದೆ. ಇದರ ಜಲಾಯನ ಭೂಮಿಯ ವಿಸ್ತೀರ್ಣ 15,807 ಚ.ಮೈ. ಇದರಲ್ಲಿ ಆಗಾಗ ಅತಿಯಾದ ಪ್ರವಾಹ ಬಂದು ನದಿಯ ಕೆಳದಂಡೆಯ ಪ್ರದೇಶಗಳಿಗೆ ಹಾನಿ ಸಂಭವಿಸುವುದುಂಟು. ಈ ನದಿಯಲ್ಲಿ ಡಿ ಮಾಯ್ನ್ ನಗರದ ವರೆಗೆ ಸ್ಟೀಮರ್‍ಗಳ ಸಂಚಾರ ತಕ್ಕಮಟ್ಟಿಗೆ ಇತ್ತು. ಅಲ್ಲಿಂದಾಚೆಗೂ ಪೋರ್ಟ್ ಡಾಜ್ ವರೆಗೆ ದೋಣಿಗಳು ಸಾಗುತ್ತಿದ್ದುವು.  ಆದರೆ ಅಮೆರಿಕನ್ ಅಂತರ್ಯುದ್ಧದ ಅನಂತರ, ರೈಲ್ವೆಯ ಬೆಳೆವಣಿಗೆಯ ಫಲವಾಗಿ ಈ ನದೀಸಾರಿಗೆ ಕ್ಷೀಣಿಸಿತು. ಡಿ. ಮಾಯ್ನ್, ಫೋರ್ಟ್ ಡಾಜ್, ಆಡಮ್ವ, ಎಸ್ಟರ್‍ವಿಲ್ ಇವು ಇದರ ಮೇಲಿರುವ ಪ್ರಮುಖ ಪಟ್ಟಣಗಳು. ಈ ನದಿಯ ದಡದ ಮೇಲಿದ್ದ ಹಳ್ಳಿಯೊಂದರಲ್ಲಿ ಡೊಮಿಂಗ್ವೀನ ಇಂಡಿಯನರಿದ್ದರೆಂದೂ ಡೊಮಿಂಗ್ವೀನ ಎಂಬ ಹೆಸರೇ ಬದಲಾಗಿ ಡಿ ಮಾಯ್ನ್ ಆಗಿ ಈ ನದಿಯ ಹೆಸರಾಯಿತೆಂದೂ ಹೇಳಲಾಗಿದೆ.
(ಆರ್.ಸಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ